top of page

ವಾರಕ್ಕೆ 70 ಗಂಟೆ ಕೆಲಸ; ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಉದ್ಯೋಗಕ್ಕೆ ಸೇರಿದ ರಿಷಿ ಸುನಕ್ ಮೇಲೆ ಮೀಮ್ಸ್ ಸುರಿಮಳೆ!

  • Writer: new waves technology
    new waves technology
  • Jul 9
  • 1 min read

ಸುನಕ್, 'ಸ್ಥೂಲ ಆರ್ಥಿಕತೆ ಮತ್ತು ಭೌಗೋಳಿಕ ರಾಜಕೀಯ ಸಮಸ್ಯೆಗಳ' ಕುರಿತು ಜಾಗತಿಕ ಗ್ರಾಹಕರಿಗೆ ಒಳನೋಟಗಳನ್ನು ನೀಡಲಿದ್ದಾರೆ ಎಂದು ಹೂಡಿಕೆ ಬ್ಯಾಂಕ್ ಘೋಷಿಸಿದೆ.

ree

ಬ್ರಿಟನ್‌ನ ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಮತ್ತೆ ಉದ್ಯೋಗಕ್ಕೆ ಮರಳಿದ್ದು, ಹಿರಿಯ ಸಲಹೆಗಾರರಾಗಿ ಗೋಲ್ಡ್‌ಮನ್ ಸ್ಯಾಚ್ಸ್‌ ಗ್ರೂಪ್‌ ಸೇರಿಕೊಂಡಿದ್ದಾರೆ.

2022ರ ಅಕ್ಟೋಬರ್‌ನಿಂದ 2024ರ ಜುಲೈವರೆಗೆ ಯುಕೆಯ ಪ್ರಧಾನಿಯಾಗಿದ್ದ ಸುನಕ್, 'ಸ್ಥೂಲ ಆರ್ಥಿಕತೆ ಮತ್ತು ಭೌಗೋಳಿಕ ರಾಜಕೀಯ ಸಮಸ್ಯೆಗಳ' ಕುರಿತು ಜಾಗತಿಕ ಗ್ರಾಹಕರಿಗೆ ಒಳನೋಟಗಳನ್ನು ನೀಡಲಿದ್ದಾರೆ ಎಂದು ಹೂಡಿಕೆ ಬ್ಯಾಂಕ್ ಘೋಷಿಸಿದೆ.

ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸುನಕ್ ಗೋಲ್ಡ್‌ಮನ್‌ ಸ್ಯಾಚ್ಸ್‌ನಲ್ಲಿಯೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ- ಸುಧಾ ಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾದರು.

ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ನಾರಾಯಣ ಮೂರ್ತಿ ಅವರ ಹೇಳಿಕೆ ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಆ ಹೇಳಿಕೆಯನ್ನಿಟ್ಟುಕೊಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಸುನಕ್ ಅವರು ಉದ್ಯೋಗಕ್ಕೆ ಸೇರಿರುವುದನ್ನು ಅಪಹಾಸ್ಯ ಮಾಡುತ್ತಿದ್ದಾರೆ.

X ನಲ್ಲಿ ಒಬ್ಬ ಬಳಕೆದಾರರು, 'ರಿಷಿ ಸುನಕ್ ವಾರಕ್ಕೆ 70 ಗಂಟೆಗಳ ಕೆಲಸದ ಕೋಟಾವನ್ನು ಪೂರ್ಣಗೊಳಿಸಲು ಗೋಲ್ಡ್‌ಮನ್ ಸ್ಯಾಚ್ಸ್‌ಗೆ ಸೇರಿದ್ದಾರೆ' ಎಂದು ಬರೆದಿದ್ದಾರೆ.

ಮತ್ತೊಬ್ಬರು, 'ನಿಮ್ಮ ಮಾವ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಿದಾಗ' ಗೋಲ್ಡ್‌ಮನ್ ಸ್ಯಾಚ್ಸ್‌ಗೆ ಸೇರಿದ್ದಾರೆ ಎಂಬ ಅರ್ಥದಲ್ಲಿ ಬರೆದಿದ್ದಾರೆ.

'ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ರಿಷಿ ಸುನಕ್ ಅವರ ಮೊದಲ ದಿನ, ಎಂದು ಬಳಕೆದಾರರೊಬ್ಬರು ಫೋಟೊವೊಂದನ್ನು ಹಂಚಿಕೊಂಡು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ.

'ರಿಷಿ ಸುನಕ್ ಇನ್ಫೋಸಿಸ್ ಸೇರಲಿಲ್ಲವೇ? ನಾರಾಯಣ ಮೂರ್ತಿಯವರ ಕೆಲಸದ ಸಮಯ ಅವರನ್ನು ತಡೆಯಿತೇ?" ಎಂದು ಸುನಕ್ ಅವರನ್ನು ಟೀಕಿಸುತ್ತಾ ಬಳಕೆದಾರರೊಬ್ಬರು ಹೇಳಿದ್ದಾರೆ.

ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷದ ಎದುರು ಕನ್ಸರ್ವೇಟಿವ್ ಪಕ್ಷವು ಐತಿಹಾಸಿಕ ಸೋಲನ್ನು ಅನುಭವಿಸಿತು. ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೂ, ರಿಷಿ ಸುನಕ್ ರಿಚ್ಮಂಡ್ ಮತ್ತು ನಾರ್ತಲರ್ಟನ್ ಸಂಸದರಾಗಿ ಪೂರ್ಣ ಅವಧಿಯನ್ನು ಪೂರೈಸಲಿದ್ದಾರೆ.

ರಿಷಿ ಸುನಕ್ ಅವರ ವೃತ್ತಿಜೀವನವು ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಪ್ರಾರಂಭವಾಯಿತು. ಅಲ್ಲಿ ಅವರು 2000ರಲ್ಲಿ ಹೂಡಿಕೆ ಬ್ಯಾಂಕಿಂಗ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದರು ಮತ್ತು 2001 ರಿಂದ 2004 ರವರೆಗೆ ವಿಶ್ಲೇಷಕರಾದರು. ನಂತರ ಅವರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಂಪನಿಗಳೊಂದಿಗೆ ಕೆಲಸ ಮಾಡುವ ಜಾಗತಿಕ ಹೂಡಿಕೆ ಸಂಸ್ಥೆಯನ್ನು ಸಹ-ಸ್ಥಾಪಿಸಿದರು.

Comments


bottom of page