top of page

ಚಿನ್ನಸ್ವಾಮಿ ಕಾಲ್ತುಳಿತ: ಗಾಯಾಳುಗಳಲ್ಲಿ ಹೆಚ್ಚಿನವರು ಡಿಸ್ಚಾರ್ಜ್; ಉಳಿದವರು ಅಪಾಯದಿಂದ ಪಾರು!

  • Writer: new waves technology
    new waves technology
  • Jun 5
  • 1 min read

ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ದಾಖಲಾಗಿರುವ 10 ರೋಗಿಗಳಲ್ಲಿ ಇಬ್ಬರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಗಾಯಗೊಂಡವರಲ್ಲಿ ಹೆಚ್ಚಿನವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಕೆಲವರು ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ದಾಖಲಾಗಿರುವ 10 ರೋಗಿಗಳಲ್ಲಿ ಇಬ್ಬರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 8 ಮಂದಿ ಬಿಡುಗಡೆಯಾಗಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದ ನಂತರ ಆಸ್ಪತ್ರೆಯಲ್ಲಿ ಒಟ್ಟು ಹದಿನೆಂಟು ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಟಿ ಕೆಂಪರಾಜು ತಿಳಿಸಿದ್ದಾರೆ.

ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕೆಂಪರಾಜು, ತಮ್ಮ ಆಸ್ಪತ್ರೆಯಲ್ಲಿ ಹೆಚ್ಚಾಗಿ ಸಣ್ಣಪುಟ್ಟ ಗಾಯಗಳು, ಉಸಿರಾಟದ ತೊಂದರೆ ಮತ್ತು ಆತಂಕಗೊಂಡವರು ಚಿಕಿತ್ಸೆಗೆ ಬಂದಿದ್ದರು. 'ಕಾಲು ಮುರಿದುಕೊಂಡಿದ್ದ ವ್ಯಕ್ತಿ ಮತ್ತು ಸಣ್ಣ ಪುಟ್ಟ ಗಾಯಗಳಾಗಿದ್ದ 14 ವರ್ಷದ ಮತ್ತೊಬ್ಬ ಬಾಲಕನಿಗೆ ನಾವು ಇನ್ನೂ ಚಿಕಿತ್ಸೆ ನೀಡುತ್ತಿದ್ದೇವೆ. ಬಲಗಣ್ಣಿನ ಬಳಿ ಗಾಯವಾಗಿರುವುದರಿಂದ, ಆತನನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಬಾಲಕನ ತಾಯಿ ಫರ್ಹೀನ್ ಮಾತನಾಡಿ, ನಾಳೆಯೊಳಗೆ ಅತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ಸ್ಥಳದಲ್ಲಿ ಏನಾಯಿತು ಎಂಬುದರ ಬಗ್ಗೆ ತನ್ನ ಮಗ ಭಯಗೊಂಡಿದ್ದಾನೆ ಮತ್ತು ಗೊಂದಲಕ್ಕೊಳಗಾಗಿದ್ದಾನೆ ಎಂದು ಹೇಳಿದರು.

ಬಾಲಕನ ಚಿಕ್ಕಪ್ಪ ನವಾಜ್, ಆತ ಆರ್‌ಸಿಬಿ ವಿಜಯೋತ್ಸವಕ್ಕೆ ಹೋಗುತ್ತಿದ್ದಾನೆ ಎಂದು ನಮಗೆ ತಿಳಿದಿರಲಿಲ್ಲ. ಅವನು ತನ್ನ ಸ್ನೇಹಿತರೊಂದಿಗೆ ಸುತ್ತಾಡುವುದಾಗಿ ನಮಗೆ ಹೇಳಿದ್ದ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಿದ್ದು, ಪ್ರಜ್ಞೆ ತಪ್ಪಿರಬಹುದು. ಆತ ಆಸ್ಪತ್ರೆಗೆ ದಾಖಲಾದ ಬಳಿಕವೇ ನಮಗೆ ಮಾಹಿತಿ ತಿಳಿಯಿತು' ಎಂದು ಹೇಳಿದರು.

Comments


bottom of page