ಅಕ್ರಮ ನಿರ್ಮಾಣದ ವಿರುದ್ಧ ಬಿಬಿಎಂಪಿ ಸಮರ: ಯಲಹಂಕ ವಲಯದಲ್ಲಿ 13 ಕಟ್ಟಡಗಳ ಅನಧಿಕೃತ ಭಾಗ ತೆರವು!
- new waves technology
- Jun 16
- 2 min read
ಯಲಹಂಕ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸುಧಾಕರ್ ಮಾತನಾಡಿ, ಕಟ್ಟಡ ಮಾಲೀಕರು ನೆಲ ಮಹಡಿ ಮತ್ತು ಎರಡು ಹೆಚ್ಚುವರಿ ಮಹಡಿಗಳಿಗೆ ಮಾತ್ರ ಅನುಮತಿ ಪಡೆದಿದ್ದಾರೆ. ಆದರೆ ಅನುಮೋದನೆ ಮೀರಿ ಒಂದು ಅಥವಾ ಎರಡು ಹೆಚ್ಚುವರಿ ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ.

ಬೆಂಗಳೂರು: ಹೆಚ್ಚುತ್ತಿರುವ ಸಾರ್ವಜನಿಕರ ಒತ್ತಡ, ಕಾನೂನು ದೂರುಗಳು ಮತ್ತು ನಿಯಮಬಾಹಿರವಾಗಿ ಕಟ್ಟಡ ನಿರ್ಮಾಣದ ಬಗ್ಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಟನೆಗಳಿಗೆ ಸ್ಪಂದಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಂತಿಮವಾಗಿ ತನ್ನ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ವಿರುದ್ಧ ನಿರ್ಣಾಯಕ ಶಿಸ್ತುಕ್ರಮವನ್ನು ಪ್ರಾರಂಭಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಯಲಹಂಕ ವಲಯದ 13 ಕಟ್ಟಡದ 'ಅನಧಿಕೃತ ಪ್ಲೋರ್' ಗಳನ್ನು ಬಿಬಿಎಂಪಿ ಎಂಜಿನಿಯರ್‌ಗಳು ನೆಲಸಮಗೊಳಿಸಿದ್ದಾರೆ.
ಯಲಹಂಕ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸುಧಾಕರ್ ಮಾತನಾಡಿ, ಕಟ್ಟಡ ಮಾಲೀಕರು ನೆಲ ಮಹಡಿ ಮತ್ತು ಎರಡು ಹೆಚ್ಚುವರಿ ಮಹಡಿಗಳಿಗೆ ಮಾತ್ರ ಅನುಮತಿ ಪಡೆದಿದ್ದಾರೆ. ಆದರೆ ಅನುಮೋದನೆ ಮೀರಿ ಒಂದು ಅಥವಾ ಎರಡು ಹೆಚ್ಚುವರಿ ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ. ಮುಖ್ಯ ಆಯುಕ್ತರ ನಿರ್ದೇಶನದಂತೆ ಅನಧಿಕೃತ ಭಾಗವನ್ನು ತೆರವುಗೊಳಿಸಿದ್ದೇವೆ. ಆದರೆ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಫಿಲ್ಲರ್ ಮತ್ತು ಮೇಲ್ಫಾವಣಿಗೆ ಯಾವುದೇ ತೊಂದರೆ ಮಾಡಿಲ್ಲ. ಅಂತಹ ಮಹಡಿಗಳನ್ನು ತೆರವುಗೊಳಿಸುವುದಷ್ಟೇ ನಮ್ಮ ಗುರಿಯಾಗಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯ ಕೆಂಪೇಗೌಡ, ಚೌಡೇಶ್ವರಿ, ಅತ್ತೂರು, ಯಲಹಂಕ ನ್ಯೂ ಟೌನ್ ವಾರ್ಡ್‌ಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಖಚಿತಪಡಿಸಿದರು.
ಕಾನೂನು ಪ್ರಕಾರ ಅನಧಿಕೃತ ಭಾಗ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಆಸ್ತಿ ಮಾಲೀಕರು ಏಳು ದಿನಗಳೊಳಗೆ ಪರವಾನಗಿಗಳು, ನಕ್ಷೆ ಮತ್ತು ಸಂಬಂಧಿತ ಅನುಮೋದನೆಗಳನ್ನು ಒದಗಿಸುವಂತೆ ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 313 ರ ಅಡಿಯಲ್ಲಿ ನೋಟೀಸ್ ನೀಡಲಾಗಿತ್ತು. ಇದರ ನಂತರ ಕಟ್ಟಡದ ಬೈಲಾ ಉಲ್ಲಂಘನೆಯನ್ನು ದೃಢೀಕರಿಸುವ ಸೆಕ್ಷನ್ 248(1), 248(2), ಮತ್ತು 248(3) ಅಡಿಯಲ್ಲಿ ನೋಟಿಸ್‌ಗಳನ್ನು ನೀಡಲಾಯಿತು. ಅಂತಿಮವಾಗಿ, ಸೆಕ್ಷನ್ 356 ರ ಅಡಿಯಲ್ಲಿ ಅನಧಿಕೃತ ಭಾಗಗಳನ್ನು ತೆರವುಗೊಳಿಸಲು ಮಾಲೀಕರಿಗೆ ಸೂಚಿಸಲಾಗಿತ್ತು. ಆದರೆ ಅವರು ಹಾಗೆ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಮಧ್ಯಪ್ರವೇಶಿಸಿದೆ.
ಸೋಮವಾರ ಮುಂಜಾನೆ ಆರಂಭವಾದ ತೆರವು ಕಾರ್ಯಾಚರಣೆ ದಿನವಿಡೀ ಮುಂದುವರಿಯುವ ನಿರೀಕ್ಷೆಯಿದೆ. ಇನ್ನುಳಿದ ವಲಯಗಳಲ್ಲೂ ಇದೇ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಅದರಲ್ಲೂ ವಿಲ್ಸನ್ ಗಾರ್ಡನ್‌ನಲ್ಲಿರುವ ಬಿಜೆಪಿ ಮುಖಂಡ ಸುರೇಶ್ ಬಾಬು ಅವರಿಗೆ ಸಂಬಂಧಿಸಿದ ಬಹುಮಹಡಿ ಕಟ್ಟಡದ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ದಕ್ಷಿಣ ವಲಯದಲ್ಲಿ ದೂರುಗಳು ಬಂದಿವೆ. ಕಟ್ಟಡವು ಎಂಟು ಮಹಡಿಗಳನ್ನು ಮೀರಿದೆ. ಈ ಸಂಬಂಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಚಿಕ್ಕಪೇಟೆ ವಿಧಾನಸಭೆ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ನೋಟಿಸ್ ನೀಡುವ ಸಾಧ್ಯತೆಯಿದೆ.
ಇಸಿಸಿ ರಸ್ತೆ, ಅಥಾಶ್ರಿ ಲೇಔಟ್ ಮತ್ತು ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಅಕ್ರಮ ನಿರ್ಮಾಣಗಳನ್ನು ಗುರುತಿಸಲಾಗಿದ್ದು, ಮಹದೇವಪುರ ವಲಯದಲ್ಲಿ ಮುಂದಿನ ಹಂತದಲ್ಲಿ ತೆರವು ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಮೂಲಗಳು ಬಹಿರಂಗಪಡಿಸಿವೆ.
Comments