Cyclone: ಕರ್ನಾಟಕ ಸೇರಿ ಕರಾವಳಿ ರಾಜ್ಯಗಳ ಮೀನುಗಾರರಿಗೆ ಹೈ ಅಲರ್ಟ್: IMD
- new waves technology
- Nov 16, 2024
- 1 min read
ಬೆಂಗಳೂರು, ನವೆಂಬರ್ 16: ನೈಋತ್ಯ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ಪರಿಚಲನೆಯಲ್ಲಿ ತೀವ್ರ ಸ್ವರೂಪದ ಬದಲಾವಣೆಗಳು ಆಗುತ್ತಿವೆ. ಈ ಕಾರಣದಿಂದಲೇ ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಗಾಳಿ ಬೀಸಲಾರಂಭಿಸಿದೆ. ಈ ಗಾಳಿಯ ವೇಗ ಇನ್ನಷ್ಟು ಹೆಚ್ಚಾಗಿ ಅತ್ಯಧಿಕ ಮಳೆ ಸುರಿಸುವ ಸಾಧ್ಯತೆ ಇದೆ.

ಹೀಗಾಗಿ ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳ ಮೀನುಗಾರರಿಗೆ ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಹೌದು... ಸಮುದ್ರ ಮೇಲ್ಮೈನಲ್ಲಿ ಚಂಡಮಾರುತ ಪರಿಚಲನೆ ಹಾಗೂ ವಾಯುಭಾರ ಕುಸಿತದ ಲಕ್ಷಣಗಳು ಕಂಡು ಬಂದಾಗ ಆಯಾ ಕರಾವಳಿ ಭಾಗದ ಜನರು ಮೀನುಗಾರಿಕೆಗೆಂದು ಸಮುದ್ರಕ್ಕೆ ಇಳಿಯುವುದು ಸುರಕ್ಷಿತವಲ್ಲ. ಸದ್ಯ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಕರಾವಳಿ ಪ್ರದೇಶಗಳಿಗೆ ಹತ್ತಿರವಾಗಿ ಸ್ಟ್ರಫ್ ಮತ್ತು ಚಂಡಮಾರುತ ಪರಿಚಲನೆ ಕಂಡು ಬಂದಿದೆ.
ಸದ್ಯ ಹವಾಮಾನ ಸ್ಥಿತಿಗತಿ ಅಂದಾಜು ಮಾಡಿರುವ ಭಾರತೀಯ ಹವಾಮಾನ ಇಲಾಖೆಯು (IMD) ಕರ್ನಾಟಕ, ಕೇರಳ, ಲಕ್ಷದ್ವೀಪ ಕರಾವಳಿ ಪ್ರದೇಶಗಳ ಮೀನುಗಾರರಿಗೆ ನವೆಂಬರ್ 17ರ ತನಕ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಈ ಮೂರು ಭಾಗದ ಕರಾವಳಿಯಲ್ಲಿ ಜೋರು ಗಾಳಿ ಬೀಸುತ್ತಿದೆ. ಇಲ್ಲೆಲ್ಲ ಕಡೆಗಳಲ್ಲಿ ಪ್ರತಿ ಗಂಟೆಗೆ ಗಾಳಿ ವೇಗವು ಪ್ರತಿ ಗಂಟೆಗೆ 30-35 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ. ಕೆಲವೊಮ್ಮೆ ಈ ಗಾಳಿಯ ವೇಗವು ಪ್ರತಿ ಗಂಟೆಗೆ 55-60 ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇರುತ್ತದೆ.
ಇಂತಹ ಸಂದರ್ಭದಲ್ಲಿ ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಇಳಿದರೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮುಂದಿನ 24 ಗಂಟೆಗಳ ಕಾಲ ಯಾರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಜಿಲ್ಲೆಗಳಿಗೆ ಭಾರೀ ಮಳೆ
ಇನ್ನೂ ಇದೇ ಕರಾವಳಿ ಭಾಗಗಳು ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶ ಕರಾವಳಿಯ ಒಂದಷ್ಟು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ವ್ಯಾಪಕವಾಗಿ ಮಳೆ ಆಗುವ ಸಾಧ್ಯತೆ ಇದೆ.
ಈಗಾಗಲೇ ಕೆಲವು ಜಿಲ್ಲೆಗಳಿಗೆ ಐಎಂಡಿ ಹಳದಿ ಎಚ್ಚರಿಕೆ ನೀಡಿದೆ. ಇನ್ನೂ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ತುಮಕೂರು ಹಾಗೂ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀಮಳೆ ಆಗಲಿದೆ ಎಂದು ಶನಿವಾರದ ಹವಾಮಾನ ಮುನ್ಸೂಚನೆಯ ವರದಿಯಲ್ಲಿ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.










Comments