ಮಡಿಕೇರಿ: ಮೇಲ್ಛಾವಣಿ ಕುಸಿದು ಸೋರುತ್ತಿರುವ ಸರ್ಕಾರಿ ಶಾಲೆ! ಬೇಕಾಗಿದೆ ಕಾಯಕಲ್ಪ
- new waves technology
- Jun 2
- 2 min read
ಮಡಿಕೇರಿ ತಾಲ್ಲೂಕಿನ ಆರ್‌ಎಸ್ ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಗ್ರಾಮೀಣ ಮತ್ತು ಆರ್ಥಿಕವಾಗಿ ದುರ್ಬಲಗೊಂಡ 37ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ

ಮಡಿಕೇರಿ: ಮೇಲ್ಛಾವಣಿಯ ಕೆಲ ಹೆಂಚುಗಳು ಒಡೆದು ಮಳೆ ನೀರು ಸೋರಿರುವುದು, ವಾಲಿದ ಟ್ರಾನ್ಸ್‌ಫಾರ್ಮರ್, ಒಡೆದ ವಿದ್ಯುತ್ ತಂತಿಗಳು, ಶಿಥಿಲಗೊಂಡ ಗೋಡೆಗಳು, ಸೂಕ್ತ ನಿರ್ವಹಣೆ ಇಲ್ಲದೆ ಕಸಗಳಿಂದ ತುಂಬಿರುವ ಶಾಲಾ ಮೈದಾನ. ಇದು ಮಡಿಕೇರಿ ತಾಲೂಕಿನ ಸರ್ಕಾರಿ ಶಾಲೆಯೊಂದರ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಶಾಲೆಯ ಕಟ್ಟಡ ಕುಸಿದು ಬೀಳುವ ಭೀತಿಯಿಂದ ಹಲವು ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಿಲ್ಲ. ಹೌದು ಮಡಿಕೇರಿ ತಾಲ್ಲೂಕಿನ ಆರ್‌ಎಸ್ ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಗ್ರಾಮೀಣ ಮತ್ತು ಆರ್ಥಿಕವಾಗಿ ದುರ್ಬಲಗೊಂಡ 37ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಆದರೆ, ಶಾಲಾ ಕಟ್ಟಡ ಕುಸಿದು ಬಿದ್ದರೆ ತೊಂದರೆಯಾಗುತ್ತದೆ ಎಂಬ ಆತಂಕದಿಂದ ಹಲವು ಪೋಷಕರು ತಮ್ಮ ಮಕ್ಕಳನ್ನು 5 ಕಿ.ಮೀ ದೂರದಲ್ಲಿರುವ ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ.
ಶಾಲೆಯು ಇಂತಹ ದಯನೀಯ ಸ್ಥಿತಿಯಲ್ಲಿದೆ. ಈ ಸಂಬಂಧ ಪೋಷಕರು ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.
ಶಾಲೆ ಆರಂಭಕ್ಕೂ ಮುನ್ನ ಶಾಲೆಯನ್ನು ಸ್ವಚ್ಛಗೊಳಿಸುವಂತೆ ಶಾಲಾ ಆಡಳಿತ ಮಂಡಳಿ ಗಮನಹರಿಸಬೇಕು.ಆದರೆ ಶಾಲೆಯ ಆವರಣದಲ್ಲಿನ ಕಳೆ ತೆಗೆದುಹಾಕುವಲ್ಲಿಯೂ ಆಡಳಿತ ಮಂಡಳಿ ವಿಫಲವಾಗಿದೆ. ನಮ್ಮ ವಿದ್ಯಾರ್ಥಿಗಳು ಕಾಡಿನೊಳಗೆ ಓದುತ್ತಿರುವಂತೆ ಭಾಸವಾಗುತ್ತಿದೆ ಇಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಮಕ್ಕಳ ಪೋಷಕರಾದ ಶೌಕತ್ ಅಲಿ ಹೇಳಿದರು.
ಜೂನ್ 1 ರಂದು ಶಾಲೆ ಪುನರಾರಂಭವಾದಾಗ ತರಗತಿಯ ಮೇಲ್ಛಾವಣಿಯ ಹೆಂಚುಗಳು ನೆಲದ ಮೇಲೆ ಮುರಿದು ಬಿದ್ದಿದ್ದವು. ವಿದ್ಯಾರ್ಥಿಗಳು ಸೋರುವ ಮೇಲ್ಫಾವಣಿ ಕೆಳಗೆ ಕುಳಿತು ಪಾಠ ಕೇಳುವಂತಾಯಿತು. ಅದು ಯಾವಾಗ ಬೇಕಾದರೂ ಬೀಳಬಹುದು ಎಂದು ಅವರು ವಿವರಿಸಿದರು. ತರಗತಿ ಕೊಠಡಿಗಳನ್ನು ಸರಿಪಡಿಸುವವರೆಗೆ ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆಡಳಿತ ಮಂಡಳಿಗೆ ಪತ್ರ ಸಲ್ಲಿಸಿದ್ದೇನೆ. ಯಾವಾಗ ಬೇಕಾದರೂ ಕುಸಿದು ಬೀಳುವ ಈ ಶಾಲೆಗಿಂತ ನಾವು ಕೆಲಸ ಮಾಡುವ ಎಸ್ಟೇಟ್‌ಗಳಲ್ಲಿ ನಮ್ಮ ಮಕ್ಕಳು ಸುರಕ್ಷಿತವಾಗಿರುತ್ತಾರೆ ಎಂದು ಅವರು ವಿಷಾದಿಸಿದರು.
ಶಾಲೆಯನ್ನು ದುರಸ್ಥಿಗೊಳಿಸುವಂತೆ ಅನೇಕ ಬಾರಿ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಅಧಿಕಾರಿಗಳಿಗೆ ಒತ್ತಾಯಿಸಿದರೂ ಯಾವುದೇ ಪರಿಹಾರ ಕಾರ್ಯ ನಡೆಸದೆ ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ತಂದಿದೆ. ಬೇಸಿಗೆ ರಜೆ ಆರಂಭವಾದಾಗಿನಿಂದಲೂ ಸಂಸ್ಥೆಯ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಿಲ್ಲ, ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಹಳೆಯ ನೀರನ್ನು ಬಳಸುತ್ತದೆ ಎಂದು ಶೌಕತ್ ದೂರಿದರು. ನಮ್ಮ ಮಕ್ಕಳು ಅನಾರೋಗ್ಯಕ್ಕೆ ಒಳಗಾದರೆ ಯಾರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ?" ಎಂದು ಪ್ರಶ್ನಿಸಿದರು.
ಇದಲ್ಲದೇ ಶಾಲೆಯ ಆವರಣದ ಹೊರಭಾಗದಲ್ಲಿರುವ ಟ್ರಾನ್ಸ್‌ಫಾರ್ಮರ್ ಅಪಾಯದ ಸ್ಥಿತಿಯಲ್ಲಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಟ್ರಾನ್ಸ್‌ಫಾರ್ಮರ್‌ನ ದುರಸ್ಥಿ ಕಾರ್ಯಕ್ಕಾಗಿ ಸೆಸ್ಕ್‌ಗೆ ಪತ್ರ ರವಾನಿಸಲಾಗಿದೆ ಎಂದು ಹೇಳಲಾಗಿದ್ದರೂ, ಶಾಲೆ ಪುನರಾರಂಭಗೊಂಡರೂ ಯಾವುದೇ ಕೆಲಸ ಆಗಿಲ್ಲ. ಇದಲ್ಲದೆ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಅನುಮೋದನೆಗಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಆದರೆ, ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಡಿಡಿಪಿಐ ರಂಗಧಾಮಯ್ಯ ಅವರನ್ನು ಪ್ರಶ್ನಿಸಿದಾಗ ಶಾಲೆಯ ದುರಸ್ಥಿ ಕಾರ್ಯಕ್ಕೆ ರೂ. 7 ಲಕ್ಷ ಮಂಜೂರಾಗಿದೆ ಎಂದು ಖಚಿತಪಡಿಸಿದರು. ಶಾಲೆ ಪುನರಾರಂಭವಾಗಿದ್ದರೂ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳದ ಕಾರಣ ಶಾಲೆ ಪುನಶ್ಚೇತನದ ನಿರೀಕ್ಷೆಯಲ್ಲಿದೆ.
Comments