top of page

Pahalgam Terror Attack: 'ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುವ ರಕ್ಕಸ ರಾಷ್ಟ್ರ'; ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತ ಗುಡುಗು; Video

  • Writer: new waves technology
    new waves technology
  • Apr 29
  • 1 min read

ಪಾಕಿಸ್ತಾನದ ನೈಜ ಬಣ್ಣ ಬಯಲಾಗಿದೆ. ಈ ತಪ್ಪೊಪ್ಪಿಗೆ ಆಶ್ಚರ್ಯವೇನಿಲ್ಲ, ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವ ‘ರಾಕ್ಷಸ ರಾಷ್ಟ್ರ’ ಎಂಬುದನ್ನು ಇದು ಬಹಿರಂಗಪಡಿಸಿದೆ.

ವಿಶ್ವಸಂಸ್ಥೆ: ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಮತ್ತಷ್ಟು ಹಳಸಿದ್ದು, ಈ ನಡುವಲ್ಲೇ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದೆ.

ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿಯ 'ವಿಕ್ಟಿಮ್ಸ್ ಆಫ್ ಟೆರರಿಸಂ ಅಸೋಸಿಯೇಷನ್ ನೆಟ್‌ವರ್ಕ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಭಾರತದ ಕಾಯಂ ಉಪ ಪ್ರತಿನಿಧಿ, ರಾಯಭಾರಿ ಯೋಜನಾ ಪಟೇಲ್ ಅವರು, ಕಳೆದ ಹಲವು ವರ್ಷಗಳಿಂದ ಭಯೋತ್ಪಾದಕರಿಗೆ ತರಬೇತಿ ಹಾಗೂ ಹಣಕಾಸಿನ ನೆರವು ನೀಡುತ್ತಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಇದರಿಂದ ಪಾಕಿಸ್ತಾನದ ನೈಜ ಬಣ್ಣ ಬಯಲಾಗಿದೆ. ಈ ತಪ್ಪೊಪ್ಪಿಗೆ ಆಶ್ಚರ್ಯವೇನಿಲ್ಲ, ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವ ‘ರಾಕ್ಷಸ ರಾಷ್ಟ್ರ’ ಎಂಬುದನ್ನು ಇದು ಬಹಿರಂಗಪಡಿಸಿದೆ ಎಂದು ಗುಡುಗಿದ್ದಾರೆ.

ಇತ್ತೀಚಿನ ದೂರದರ್ಶನ ಸಂದರ್ಶನವೊಂದರಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು, ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ, ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ಪಾಕಿಸ್ತಾನದ ಇತಿಹಾಸವನ್ನು ಒಪ್ಪಿಕೊಂಡಿದ್ದಾರೆ. ಅದನ್ನು ಇಡೀ ಜಗತ್ತು ನೋಡಿದೆ. ಈ ಬಹಿರಂಗ ತಪ್ಪೊಪ್ಪಿಗೆಯಿಂದ ಯಾರಿಗೂ ಆಶ್ಚರ್ಯವಾಗುವುದಿಲ್ಲ. ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುವ ಮತ್ತು ಪ್ರದೇಶವನ್ನು ಅಸ್ಥಿರಗೊಳಿಸುವ ರಕ್ಕಸ ರಾಷ್ಟ್ರ ಎಂಬುದನ್ನು ಇದು ಬಹಿರಂಗಪಡಿಸುತ್ತದೆ. ಜಗತ್ತು ಇನ್ನು ಮುಂದೆ ಕಣ್ಣು ಮುಚ್ಚಿಕೊಂಡು ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

‘ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಮತ್ತು ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲು’ ಪಾಕಿಸ್ತಾನ ಜಾಗತಿಕ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ದುರ್ಬಲಗೊಳಿಸುತ್ತಿದೆ ಎಂದು ಟೀಕಿಸಿದರು.

ಇದೇ ವೇಳೆ ಪಹಲ್ಗಾಮ್ ದಾಳಿಯ ನಂತರ ಭಾರತಕ್ಕೆ ಲಭಿಸಿದ ಬಲ, ಬೆಂಬಲ ಮತ್ತು ಒಗ್ಗಟ್ಟಿಗೆ’ ಜಾಗತಿಕ ಸಮುದಾಯಕ್ಕೆ ಪಟೇಲ್ ಧನ್ಯವಾದ ಅರ್ಪಿಸಿದರು. ಇದು ಅಂತರರಾಷ್ಟ್ರೀಯ ಸಮುದಾಯದ ಭಯೋತ್ಪಾದನೆಯ ಶೂನ್ಯ ಸಹಿಷ್ಣುತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

2008 ರಲ್ಲಿ ನಡೆದ 26/11 ಮುಂಬೈ ದಾಳಿಯ ನಂತರ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಅತಿ ಹೆಚ್ಚು ನಾಗರಿಕ ಸಾವುನೋವುಗಳನ್ನು ಕಂಡಿದೆ. ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ಬಲಿಪಶುವಾಗಿರುವ ಭಾರತವು, ಇಂತಹ ಕೃತ್ಯಗಳು ಬಲಿಪಶುಗಳ ಕುಟುಂಬಗಳು ಮತ್ತು ಸಮಾಜದ ಮೇಲೆ ಬೀರುವ ದೀರ್ಘಕಾಲೀನ ಪರಿಣಾಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ ಎಂದು ತಿಳಿಸಿದರು.

ವೋಟಾನ್ ಸ್ಥಾಪನೆಯು ಭಯೋತ್ಪಾದನೆಯ ಬಲಿಪಶುಗಳಿಗೆ ಸುರಕ್ಷಿತ ಸ್ಥಳವನ್ನು ಸೃಷ್ಟಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಮತ್ತು ಬ್ರಿಟನ್‌ ಒಳಗೊಂಡಂತೆ ಪಶ್ಚಿಮದ ರಾಷ್ಟ್ರಗಳಿಗಾಗಿ ನಾವು ಸುಮಾರು ಮೂರು ದಶಕಗಳಿಂದ ಈ ಕೊಳಕು ಕೆಲಸ ಮಾಡುತ್ತಿದ್ದೇವೆ ಎಂದು ಖ್ವಾಜಾ ಆಸಿಫ್‌ ಹೇಳಿದ್ದರು.

Comments


bottom of page