top of page

IPL 2025: 'ನೀವು ರೋಹಿತ್ ಶರ್ಮಾ ಆಗಿದ್ದಕ್ಕೆ, ಇನ್ನೂ MI ಪ್ರಾಂಚೈಸಿಯಲ್ಲಿ ಉಳಿದುಕೊಂಡಿದ್ದೀರಿ'; ಇಂಗ್ಲೆಂಡ್ ಮಾಜಿ ಆಟಗಾರ ಟೀಕೆ

  • Writer: new waves technology
    new waves technology
  • Apr 1
  • 2 min read

ರೋಹಿತ್ ಶರ್ಮಾ ಅವರನ್ನು ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಬ್ಯಾಟ್ಸ್‌ಮನ್ ಆಗಿ ಮಾತ್ರ ನೋಡಲಾಗುತ್ತಿದೆ. ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಬಳಸಲಾಗುತ್ತಿದೆ. ಫ್ರಾಂಚೈಸಿ ಹೆಚ್ಚಿನ ಪಂದ್ಯಗಳಲ್ಲಿ ಅವರ ಅನುಭವವನ್ನು ಬಳಸದಿರಲು ನಿರ್ಧರಿಸಿದೆ.

ಸೋಮವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಸೋಲಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ನೇ ಆವೃತ್ತಿಯ ಮೊದಲ ಗೆಲುವು ಸಾಧಿಸಿತು. ವೇಗಿ ಅಶ್ವನಿ ಕುಮಾರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ರಿಯಾನ್ ರಿಕಲ್ಟನ್ ಅವರ ಉತ್ತಮ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಯಿತು. ಆದರೆ, ಮಾಜಿ ನಾಯಕ ರೋಹಿತ್ ಶರ್ಮಾ ಮತ್ತೆ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ.

ರೋಹಿತ್ 12 ಎಸೆತಗಳಲ್ಲಿ 13 ರನ್ ಗಳಿಸಿ ನಿರ್ಗಮಿಸಿದ್ದು, ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಇದೇ ರೀತಿಯ ಪ್ರದರ್ಶನ ನೀಡಿದ್ದರೆ ರೋಹಿತ್ ಸ್ಥಾನದಲ್ಲಿ ಇನ್ನೊಬ್ಬ ಆಟಗಾರ ಇದ್ದರೆ, ಅವರನ್ನು ತಂಡದಿಂದ ಕೈಬಿಡಲಾಗುತ್ತಿತ್ತು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕ್‌ಬಜ್‌ನಲ್ಲಿ ನಡೆದ ಚಾಟ್‌ನಲ್ಲಿ ಮಾತನಾಡಿದ ಅವರು, ರೋಹಿತ್ ಶರ್ಮಾ ಅವರನ್ನು ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಬ್ಯಾಟ್ಸ್‌ಮನ್ ಆಗಿ ಮಾತ್ರ ನೋಡಲಾಗುತ್ತಿದೆ. ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಬಳಸಲಾಗುತ್ತಿದೆ. ಫ್ರಾಂಚೈಸಿ ಹೆಚ್ಚಿನ ಪಂದ್ಯಗಳಲ್ಲಿ ಅವರ ಅನುಭವವನ್ನು ಬಳಸದಿರಲು ನಿರ್ಧರಿಸಿದೆ ಎಂದಿದ್ದಾರೆ.

'ನಾನು ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ಅವರ ಬಗ್ಗೆ ಯಾವಾಗಲೂ ತಲೆ ಕೆಡಿಸಿಕೊಳ್ಳುತ್ತೇನೆ. ಅವರು ಟೀಂ ಇಂಡಿಯಾದ ನಾಯಕನಾಗುವಷ್ಟು ಉತ್ತಮ ಆಟಗಾರನಾಗಿದ್ದರೆ, ಮುಂಬೈ ತಂಡಕ್ಕೆ ಏಕೆ ನಾಯಕನಾಗಲು ಅರ್ಹರಲ್ಲ ಎಂದು ನಾನು ಯಾವಾಗಲೂ ಯೋಚಿಸುತ್ತೇನೆ? ಅವರು ಟೀಂ ಇಂಡಿಯಾಗೆ ಅದ್ಭುತ ನಾಯಕ. ಅವರು ಉತ್ತಮ ಕೆಲಸ ಮಾಡಿದ್ದಾರೆ' ಎಂದು ವಾಘನ್ ಹೇಳಿದರು.

'ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಏನಾಗಿದೆ ಎಂಬುದನ್ನು ನೀವು ನೋಡಬೇಕು. ರಾಷ್ಟ್ರೀಯ ತಂಡವನ್ನು ಮುನ್ನಡೆಸಲು ಅವರು ಉತ್ತಮ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದರೆ, ಫ್ರಾಂಚೈಸಿಯನ್ನು ಮುನ್ನಡೆಸಲು ಏಕೆ ಸಾಧ್ಯವಿಲ್ಲ? ಅವರು ಇಡೀ ಆವೃತ್ತಿಯಲ್ಲಿ ಆಡಲಿದ್ದಾರೆ. ಕಳೆದ ವರ್ಷದಿಂದ ಈ ಬಗ್ಗೆ ವಿವಾದ ಉಂಟಾಗಿದೆ' ಎಂದು ಅವರು ಹೇಳಿದರು.

ಐಪಿಎಲ್ 2025ನೇ ಆವೃತ್ತಿಯ ಮೂರು ಪಂದ್ಯಗಳಲ್ಲಿ ರೋಹಿತ್ 0, 8 ಮತ್ತು 13 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದರೆ, ವಿಷಯಗಳು ತುಂಬಾ ಭಿನ್ನವಾಗಿರುತ್ತಿದ್ದವು. ಆಗ, ಮ್ಯಾನೇಜ್‌ಮೆಂಟ್ ಕೂಡ ಅವರನ್ನು ನಾಯಕನಾಗಿ ಗೌರವಿಸುತ್ತಿತ್ತು. ಆದರೆ, ಒಬ್ಬ ಬ್ಯಾಟ್ಸ್‌ಮನ್ ಆಗಿ, ಇದು ಉತ್ತಮವಾಗಿಲ್ಲ ಎಂದರು.

'ರೋಹಿತ್ ಶರ್ಮಾ ಅವರು ತಂಡದ ನಾಯಕನಾಗಿಲ್ಲದ ಕಾರಣ, ಅವರ ಬ್ಯಾಟ್‌ನಿಂದ ಮೂಡಿಬರುವ ರನ್‌ಗಳನ್ನು ಹೆಚ್ಚು ವಿಮರ್ಶಾತ್ಮಕವಾಗಿ ನೋಡಬೇಕಾಗುತ್ತದೆ. ಬೇರೆ ಯಾವುದೇ ಆಟಗಾರನು ಇದೇ ರೀತಿಯಲ್ಲಿ ರನ್ ಗಳಿಸಿದ್ದರೆ, ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿತ್ತು. ರೋಹಿತ್ ಶರ್ಮಾ ಅವರ ಪ್ರತಿಭೆಯನ್ನು ಗಮನಿಸಿದರೆ, ಅವರ ಸದ್ಯದ ಪ್ರದರ್ಶನವು ಅವರ ಸಾಮರ್ಥ್ಯಕ್ಕೆ ತಕ್ಕನಾಗಿಲ್ಲ. ಅದಕ್ಕಿಂತ ತುಂಬಾ ಕಡಿಮೆಯಾಗಿದೆ. ಬ್ಯಾಟ್ಸ್‌ಮನ್ ಆಗಿ ರೋಹಿತ್ ತಂಡಕ್ಕೆ ಉತ್ತಮ ರನ್‌ಗಳನ್ನು ಗಳಿಸಬೇಕಾಗುತ್ತದೆ' ಎಂದು ತಿಳಿಸಿದರು.

ಪ್ರಸ್ತುತ ಪರಿಸ್ಥಿತಿಯ ಬಗ್ಗೆ ರೋಹಿತ್ ಮತ್ತು ಮ್ಯಾನೇಜ್‌ಮೆಂಟ್ ನಡುವೆ ಸಂಭಾಷಣೆ ನಡೆಯಬೇಕಾಗಿದೆ. ಫ್ರಾಂಚೈಸಿ ತಮ್ಮ ಮಾಜಿ ನಾಯಕನಿಂದ ಉತ್ತಮವಾದದ್ದನ್ನು ಪಡೆಯಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ವಾಘನ್ ಹೇಳಿದರು.


Comments


bottom of page