top of page

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ? ಮಾಹಿತಿ ಹಂಚಿಕೊಂಡ ಸುನಿತಾ ವಿಲಿಯಮ್ಸ್! ತವರು ರಾಷ್ಟ್ರದ ಭೇಟಿಗೆ ಕಾತರ..

  • Writer: new waves technology
    new waves technology
  • Apr 1
  • 1 min read

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ವಾಷಿಂಗ್ಟನ್: ಒಂಬತ್ತು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿ, ಇತ್ತೀಚಿಗೆ SpaceX Crew-9 ಮಿಷನ್ ನಡಿ ಭೂಮಿಗೆ ಬಂದ ಗಗನ ಯಾತ್ರಿ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅವರೊಂದಿಗೆ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದು, ಹಲವು ಮಹತ್ವದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಭಾರತ ಬಾಹ್ಯಾಕಾಶದಿಂದ ನೋಡಲು ಅದ್ಬುತವಾಗಿ ಕಾಣಿಸುತ್ತದೆ. ನಾವು ಹಿಮಾಲಯದ ಮೇಲೆ ಹಾದು ಹೋದಾಗಲೆಲ್ಲಾ ಬುಚ್ ವಿಲ್ಮೋರ್ ಹಿಮಾಲಯದ ಕೆಲವೊಂದು ಅದ್ಭುತ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಅವುಗಳು ಅದ್ಬುತವಾಗಿವೆ ಎಂದು ಸುನಿತಾ ವಿಲಿಯಮ್ಸ್ ಹೇಳಿದರು.

ಹಗಲಿನಲ್ಲಿ ಹಿಮಾಲಯವನ್ನು ನೋಡುವುದೇ ಅದ್ಭುತವಾಗಿತ್ತು. ಗುಜರಾತ್ ಮತ್ತು ಮುಂಬೈಗೆ ಹೋದಾಗ ಅಲ್ಲಿನ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯು ಚಿಕ್ಕ ಬೆಳಕಿನಂತೆ ಕಾಣುತ್ತಿದ್ದವು, ದೊಡ್ಡ ದೊಡ್ಡ ನಗರಗಳು ಪುಟ್ಟ ಪುಟ್ಟ ಹಳ್ಳಿಗಳಂತೆ ಕಾಣಿಸುತ್ತವೆ. ಭಾರತದಲ್ಲಿ ದೊಡ್ಡ ನಗರಗಳಿಂದ ಸಣ್ಣ ಪಟ್ಟಣಗಳವರೆಗೆ, ರಾತ್ರಿಯಲ್ಲಿ ಕಾಣುವ ದೀಪಗಳನ್ನು ನೋಡುವುದು ಮತ್ತಷ್ಟು ಸುಂದರವಾಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡರು.

ಭಾರತವು ಒಂದು ಮಹಾನ್, ಅದ್ಭುತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅದು ಬಾಹ್ಯಾಕಾಶದಲ್ಲಿ ತನ್ನ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇಸ್ರೋ 2026 ರ ವೇಳೆಗೆ ಗಗನಯಾತ್ರಿಗಳನ್ನು ಕಕ್ಷೆಗೆ ಕಳುಹಿಸಲು ಸಜ್ಜಾಗಿದೆ. ಇದರಲ್ಲಿ ಭಾಗವಾಗುವ ಮೂಲಕ ನಾವು ಭಾರತಕ್ಕೆ ನೆರವಾಗಲು ಬಯಸುತ್ತೇವೆ. ಶೀಘ್ರ ಭಾರತಕ್ಕೆ ಭೇಟಿ ನೀಡುತ್ತೇನೆ, ಅಲ್ಲಿಯ ಜನರೊಂದಿಗೆ ಸಾಧ್ಯವಾದಷ್ಟು ಅನುಭವವನ್ನು ಹಂಚಿಕೊಳ್ಳುತ್ತೇನೆ ಎಂದು ಸುನಿತಾ ಹೇಳಿದ್ದಾರೆ.

ಸುನೀತಾ ಅವರ ತಂದೆ ದೀಪಕ್ ಪಾಂಡ್ಯ ಗುಜರಾತ್‌ ಮೂಲದವರಾಗಿದ್ದು, 1958 ರಲ್ಲಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. ಓಹಿಯೋದಲ್ಲಿ ದೀಪಕ್ ಮತ್ತು ಉರ್ಸುಲಿನ್ ಬೋನಿ ಪಾಂಡ್ಯ ದಂಪತಿಗೆ ಸುನೀತಾ ಜನಿಸಿದರು. ವಿಲ್ಮರ್ ಅವರನ್ನು ಭಾರತಕ್ಕೆ ಕರೆದುಕೊಂಡು ಹೋಗುತ್ತಿರಾ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಎಂದು ನಗುತ್ತಾ ಉತ್ತರಿಸಿದರು ಸುನೀತಾ ವಿಲಿಯಮ್ಸ್.

Comments


bottom of page