top of page

ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡ ಭಾರತದ ರೂಪಾಯಿ ಮೌಲ್ಯ

  • Writer: new waves technology
    new waves technology
  • 3 days ago
  • 1 min read
ree

ಮುಂಬೈ: ಶುಕ್ರವಾರದ ಆರಂಭಿಕ ವಹಿವಾಟುವಿನಲ್ಲಿ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 24 ಪೈಸೆ ಏರಿಕೆ ಕಂಡಿದ್ದು, 89.96ಕ್ಕೆ ಏರಿದೆ. ಈ ವಾರದ ಆರಂಭದಲ್ಲಿ ರೂಪಾಯಿ ಮೌಲ್ಯ 91ಕ್ಕೆ ಕುಸಿಯುವ ಮೂಲಕ ಸಾರ್ವಕಾಲಿಕ ಕುಸಿತ ದಾಖಲಿಸಿತ್ತು.


ಕಾರ್ಪೊರೇಟ್ ಡಾಲರ್ ಒಳಹರಿವು ಮತ್ತು ಕಚ್ಚಾತೈಲ ಬೆಲೆ ಇಳಿಕೆ ಈ ಚೇತರಿಕೆಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 59 ಡಾಲರ್‌ಗೆ ಇಳಿದಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು 90.19ರಲ್ಲಿ ಆರಂಭವಾದ ರೂಪಾಯಿ ಮೌಲ್ಯ ಬಳಿಕ 24 ಪೈಸೆ ಚೇತರಿಸಿಕೊಂಡು 89.96ಕ್ಕೆ ತಲುಪಿತು.

ಗುರುವಾರವೂ 18 ಪೈಸೆ ಏರಿಕೆ ಕಂಡಿದ್ದ ರೂಪಾಯಿ ಮೌಲ್ಯ, 90.20ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.

'ಅಮೆರಿಕ ಡಾಲರ್ ಖರೀದಿ ಸಿಡೋಮ್ ಕೊಂಚ ಕಡಿಮೆ ಆಗಿದ್ದು, ಈ ದಿನದ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ ಮತ್ತಷ್ಟು ಚೇತರಿಕೆ ನಿರೀಕ್ಷಿಸಬಹುದಾಗಿದೆ' ಎಂದು ಫಿನ್‌ರೆಕ್ಸ್ ಟ್ರೆಶರಿ ಅಡ್ಡೆಸರಿ ಸಂಸ್ಥೆಯ ಅಧಿಕಾರಿ ಅನಿಲ್ ಕುಮಾರ್ ಬನ್ಸಾಲಿ ಹೇಳಿದ್ದಾರೆ.

ಅಮೆರಿಕದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ನಿರೀಕ್ಷೆಗಿಂತ ಕಡಿಮೆ ಬಂದಿದೆ. ಮುಂದಿನ ತಿಂಗಳ ಸಿಪಿಐ ಬಹಳ ಮುಖ್ಯ ಎಂದು ಬನ್ಸಾಲಿ ಹೇಳಿದ್ದಾರೆ.

ಇತ್ತ, ದೇಶೀಯ ಈಕ್ವಿಟಿ ಷೇರುಪೇಟೆಯಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 375.98 ಅಂಶಗಳಷ್ಟು ಏರಿಕೆ ಕಂಡು 84,857.79ರಲ್ಲಿ ವಹಿವಾಟು ಆರಂಭಿಸಿತು. ಎನ್‌ಎಸ್‌ಇ ನಿಫ್ಟಿ 110.60 ಅಂಶ ಏರಿಕೆ ಕಂಡು 25,934.15ರಲ್ಲಿ ವಹಿವಾಟು ಆರಂಭಿಸಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ₹595.78 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

Comments


bottom of page