ಕೇದಾರನಾಥ ಬಾಗಿಲು ಓಪನ್; ಭಕ್ತರ ಸ್ವಾಗತಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ
- new waves technology
- 11 hours ago
- 1 min read
ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಕೇದಾರನಾಥ: ಹಿಮಾಲಯ ದೇವಾಲಯ ಕೇದಾರನಾಥದ ದ್ವಾರಗಳನ್ನು ಶುಕ್ರವಾರ ಬೆಳಿಗ್ಗೆ 07:00 ಗಂಟೆಗೆ ತೆರೆಯಲಾಗಿದ್ದು, ಭಕ್ತರಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸ್ವಾಗತಿಸಿದರು.
ದೇವಾಲಯ ಬಾಗಿಲು ತೆರೆಯುವ ವೇಳೆ ಭಾರತೀಯ ಸೇನೆಯ ಬ್ಯಾಂಡ್ ಭಕ್ತರಿಗಾಗಿ ಭಕ್ತಿಗೀತೆಗಳನ್ನು ನುಡಿಸಿದ್ದು, ಈ ವೇಳೆ ಹೆಲಿಕಾಪ್ಟರ್'ಗಳಿಂದ ಹೂಮಳೆಯನ್ನು ಸುರಿಸಲಾಯಿತು.
ದೇವಾಲಯ ಬಾಗಿಲು ತೆರೆದಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಉತ್ತರಾಖಂಡ ಸಿಎಂ, "ಇಂದು, ಗೌರಿಕುಂಡ್‌ನಲ್ಲಿ ಧಾರ್ಮಿಕ ಪೂಜೆಯ ನಂತರ, ಕೇದಾರನಾಥದ ಪಂಚಮುಖಿ ವಿಗ್ರಹವು ಪವಿತ್ರ ಶ್ರೀ ಕೇದಾರಧಾಮವನ್ನು ತಲುಪಿತು. ಡೋಲಿ ದೇವಾಲಯದ ಆವರಣವನ್ನು ತಲುಪಿದಾಗ, ಭಕ್ತರಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಡೆ 'ಜೈ ಬಾಬಾ ಕೇದಾರ' ಎಂಬ ಜಪ ಪ್ರತಿಧ್ವನಿಸಿತು ಎಂದು ಹೇಳಿದ್ದಾರೆ.
ಇದರೊಂದಿಗೆ ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಭಕ್ತರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಕ್ಷಯ್ ಪ್ರಹ್ಲಾದ್ ಕೊಂಡೆ ಹೇಳಿದ್ದಾರೆ.
"ಈ ಯಾತ್ರೆಯು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಭಕ್ತರ ಸುರಕ್ಷತೆ ಮತ್ತು ಭದ್ರತೆ ನಮ್ಮ ಆದ್ಯತೆಯಾಗಿದೆ... ಭದ್ರತೆ ಮತ್ತು ನಿರ್ವಹಣಾ ಉದ್ದೇಶಗಳಿಗಾಗಿ ಸೂಕ್ತ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, 2025 ರ ಶ್ರೀ ಕೇದಾರನಾಥ ಧಾಮ ಯಾತ್ರೆಗೆ ಹೆಲಿಕಾಪ್ಟರ್ ಸೇವೆ ಉತ್ತರಾಖಂಡದ ಸೋನ್‌ಪ್ರಯಾಗದಿಂದ ಪ್ರಾರಂಭವಾಗಿದ್ದು, ಇದು ಯಾತ್ರಿಕರಿಗೆ ಅನುಕೂಲಕರ ಪ್ರಯಾಣದ ಆಯ್ಕೆಯನ್ನು ನೀಡುತ್ತದೆ.